ರಕ್ಷಾಬಂಧನ ಹಬ್ಬವನ್ನು ಶ್ರಾವಣ ಹುಣ್ಣಿಮೆಯಂದು ಆಚರಿಸಲಾಗುತ್ತದೆ. 2024 ರಲ್ಲಿ ರಕ್ಷಾಬಂಧನವನ್ನು ಸೋಮವಾರ, ಅಗಸ್ಟ್ 19 ರಂದು ಆಚರಿಸಲಾಗುವುದು. ಈ ದಿನ ಸಹೋದರಿಯರು ತಮ್ಮ ಸಹೋದರರ ಆರತಿ ಬೆಳಗಿ, ಪ್ರೀತಿಯ ಪ್ರತೀಕವೆಂದು ರಾಖಿಯನ್ನು ಕಟ್ಟುತ್ತಾರೆ. ಸಹೋದರರು ಏನಾದರೂ ಒಂದು ವಸ್ತುವನ್ನು ಉಡುಗೊರೆಯಾಗಿ ನೀಡಿ ಆಶೀರ್ವಾದವನ್ನೂ ನೀಡುತ್ತಾರೆ.
ಇದರ ಹಿಂದೆ ಸಹೋದರನ ಏಳಿಗೆಯಾಗಬೇಕು ಮತ್ತು ಸಹೋದರನು ಸಹೋದರಿಯ ರಕ್ಷಣೆಯನ್ನು ಮಾಡಬೇಕು ಎನ್ನುವ ಉದ್ದೇಶವಿರುತ್ತದೆ. ರಕ್ಷಾಬಂಧನದಿಂದ ಸಹೋದರ-ಸಹೋದರಿಯರ ನಡುವೆ ಪ್ರೀತಿ ಹೆಚ್ಚಾಗುವುದರೊಂದಿಗೆ ಅವರ ನಡುವೆ ಇರುವ ಕೊಡ-ಕೊಳ್ಳುವ ಲೆಕ್ಕಾಚಾರ ಕಡಿಮೆಯಾಗುತ್ತದೆ. ಈ ಹಬ್ಬವು ಇಬ್ಬರಿಗೂ ಈಶ್ವರನತ್ತ ಪ್ರಯಾಣಿಸುವ ಅವಕಾಶ ಒದಗಿಸುತ್ತದೆ.
ಇವನ್ನು ಮಾಡಿ
ಇವನ್ನು ಮಾಡಬೇಡಿ
- ರಾಖಿಯನ್ನು ಕಟ್ಟಿಸಿಕೊಳ್ಳುವಾಗ ಸಹೋದರನು ಕುಳಿತುಕೊಳ್ಳುವ ಮಣೆಯ ಸುತ್ತಲೂ ಸಾತ್ವಿಕ ರಂಗೋಲಿಯನ್ನು ಬಿಡಿಸಬೇಕು. ಸಾತ್ವಿಕ ರಂಗೋಲಿಯಿಂದ ಸಾತ್ವಿಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತವೆ. ಅದರಿಂದ ವಾತಾವರಣವು ಸಾತ್ವಿಕವಾಗುತ್ತದೆ.
- ರಾಖಿಯನ್ನು ಕಟ್ಟಿದ ನಂತರ ಸಹೋದರನಿಗೆ ತುಪ್ಪದ ನೀಲಾಂಜನದಿಂದ ಆರತಿಯನ್ನು ಬೆಳಗಿಸುತ್ತಾರೆ. ತುಪ್ಪದ ದೀಪವು ಶಾಂತರೀತಿಯಲ್ಲಿ ಉರಿಯುತ್ತದೆ. ಅದರಿಂದ ಸಹೋದರನಲ್ಲಿ ಶಾಂತ ರೀತಿಯಲ್ಲಿ ವಿಚಾರ ಮಾಡುವ ಬುದ್ಧಿಯು ವೃದ್ಧಿಯಾಗುವಲ್ಲಿ ಸಹಾಯವಾಗುತ್ತದೆ.
- ಆರತಿಯ ತಟ್ಟೆಯಲ್ಲಿ ದುಡ್ಡು ಅಥವಾ ಇತರ ಬೆಲೆಬಾಳುವ ವಸ್ತುಗಳನ್ನು ಇಡಬಾರದು. ಇಂತಹ ವಸ್ತುಗಳನ್ನು ಇಟ್ಟರೆ ಸಹೋದರಿಯ ಮನಸ್ಸಿನಲ್ಲಿ ಆ ದಿಕ್ಕಿನಲ್ಲಿ ಅಪೇಕ್ಷೆ ನಿರ್ಮಾಣವಾಗಿ ಅದೇ ಸಂಸ್ಕಾರ ಪ್ರಬಲವಾಗುತ್ತದೆ. ಇದರಿಂದ ಅವಳಲ್ಲಿ ರಜ ತಮ ಸಂಸ್ಕಾರಗಳ ಪ್ರಮಾಣ ಹೆಚ್ಚಾಗಿ ಅವಳಲ್ಲಿರುವ ಪ್ರೇಮವು ಕಡಿಮೆ ಆಗಿ ಸಹೋದರನ ಜೊತೆ ಕಲಹ ನಿರ್ಮಾಣವಾಗುತ್ತದೆ.
ರಾಖಿ ಕಟ್ಟುವುದರ ಹಿಂದಿರುವ ಉದ್ದೇಶ
ಸಹೋದರ-ಸಹೋದರಿಯರ ನಡುವಿನ ಕೊಡ-ಕೊಳ್ಳುವಿಕೆಯ ಲೆಕ್ಕಾಚಾರ ಕಡಿಮೆ ಮಾಡಲು
ಸಹೋದರ-ಸಹೋದರಿಯರ ನಡುವೆ ಸಾಧಾರಣ 30% ಕೊಡ-ಕೊಳ್ಳುವಿಕೆಯ ಲೆಕ್ಕವಿರುತ್ತದೆ. ರಕ್ಷಾಬಂಧನದಂತಹ ಹಬ್ಬಗಳನ್ನು ಆಚರಿಸುವುದರಿಂದ ಅವರು ಸ್ಥೂಲ ಬಂಧನದಲ್ಲಿ ಸಿಲುಕಿದಂತೆ ಕಂಡರೂ ಸೂಕ್ಷ್ಮ ಸ್ತರದಲ್ಲಿ ಅವರ ನಡುವೆ ಇರುವ ಕೊಡ-ಕೊಳ್ಳುವ ಲೆಕ್ಕಾಚಾರ ಕಡಿಮೆಯಾಗುತ್ತದೆ.