ಎಲ್ಲ ವರ್ಷಾರಂಭಗಳಲ್ಲಿ ಅತ್ಯಂತ ಯೋಗ್ಯ ವರ್ಷಾರಂಭದ ದಿನವೆಂದರೆ ‘ಚೈತ್ರ ಶುಕ್ಲ ಪ್ರತಿಪದೆ’. ತದ್ವಿರುದ್ಧ ಚೈತ್ರ ಶುಕ್ಲ ಪ್ರತಿಪದೆಯಂದು ವರ್ಷಾರಂಭವನ್ನು ಮಾಡಲು ನೈಸರ್ಗಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕಾರಣಗಳಿವೆ.
ನೈಸಗಿಕ ಕಾರಣಗಳು: ಸರಿಸುಮಾರು ಪ್ರತಿಪದೆಯ ಸಮಯದಲ್ಲಿ ಸೂರ್ಯನು ವಸಂತ – ಸಂಪಾತದ ಮೇಲೆ ಬರುತ್ತಾನೆ (ಸಂಪಾತ ಬಿಂದು ಎಂದರೆ (ಮಕರ) ಕ್ರಾಂತಿವೃತ್ತ ಮತ್ತು ವಿಷುವವೃತ್ತ (ಕರ್ಕಾಟಕ) ಈ ಎರಡು ವೃತ್ತಗಳು ಯಾವ ಬಿಂದುವಿನಲ್ಲಿ ಪರಸ್ಪರ ಭೇದಿಸುತ್ತವೆಯೋ ಆ ಬಿಂದು) ಮತ್ತು ವಸಂತ ಋತುವು ಪ್ರಾರಂಭವಾಗುತ್ತದೆ. ಎಲ್ಲ ಋತುಗಳಲ್ಲಿ ‘ಕುಸುಮಾಕರಿ ವಸಂತ ಋತುವು ನನ್ನ ವಿಭೂತಿಯಾಗಿದೆ’ ಎಂದು ಭಗವಂತನು ಶ್ರೀಮದ್ಭಗವದ್ಗೀತೆಯಲ್ಲಿ (೧೦:೩೫) ಹೇಳಿದ್ದಾನೆ. ಈ ಸಮಯದಲ್ಲಿ ಸಮಶೀತೋಷ್ಣ, ಉತ್ಸಾಹವರ್ಧಕ ಮತ್ತು ಆಹ್ಲಾದಕರ ವಾತಾವರಣವಿರುತ್ತದೆ. ಶಿಶಿರ ಋತುವಿನಲ್ಲಿ ಗಿಡಮರಗಳ ಎಲೆಗಳು ಉದುರಿ ಹೋಗಿರುತ್ತವೆ ಮತ್ತು ಪ್ರತಿಪದೆಯ ಸಮಯದಲ್ಲಿ ಅವುಗಳಿಗೆ ಹೊಸ ಚಿಗುರು ಬರುತ್ತಿರುತ್ತವೆ. ಗಿಡಮರಗಳು ಚೆನ್ನಾಗಿ ಕಾಣುತ್ತವೆ. ಯುಗಾದಿ ಪಾಡ್ಯದಂದು ಪ್ರಾರಂಭವಾಗುವ ಹೊಸವರ್ಷದ ಕಾಲಚಕ್ರವು ವಿಶ್ವದ ಉತ್ಪತ್ತಿಯ ಕಾಲಚಕ್ರಕ್ಕೆ ಸಂಬಂಧಿಸಿದೆ. ಆದುದರಿಂದ ಸೃಷ್ಟಿಯು ನವಚೇತನದಿಂದ ತುಂಬಿರುತ್ತದೆ. ಯುಗಾದಿ ಪಾಡ್ಯದಂದು ಪ್ರಾರಂಭವಾಗುವ ಹೊಸವರ್ಷದ ತುಲನೆಯನ್ನು ಸೂರ್ಯೋದಯಕ್ಕೆ ಉದಯವಾಗುವ ತೇಜೋಮಯ ದಿನದೊಂದಿಗೆ ಮಾಡಬಹುದು.
ಐತಿಹಾಸಿಕ ಕಾರಣಗಳು: ಈ ದಿನದಂದು ರಾಮನು ವಾಲಿಯನ್ನು ವಧಿಸಿದನು. ವಿಜಯದ ಪ್ರತೀಕವು ಎತ್ತರದಲ್ಲಿರುತ್ತದೆ. ಹಾಗಾಗಿ ಬ್ರಹ್ಮಧ್ವಜ ಎತ್ತರದಲ್ಲಿರುತ್ತದೆ. ಈ ದಿನದಿಂದಲೇ ‘ಶಾಲಿವಾಹನ ಶಕೆ’ ಪ್ರಾರಂಭವಾಯಿತು, ಏಕೆಂದರೆ ಈ ದಿನ ಶಾಲಿವಾಹನನು ಶತ್ರುಗಳ ಮೇಲೆ ವಿಜಯವನ್ನು ಪಡೆದನು.
ಆಧ್ಯಾತ್ಮಿಕ ಕಾರಣಗಳು : ಬ್ರಹ್ಮದೇವನು ಇದೇ ದಿನದಿಂದು ಸೃಷ್ಟಿಯನ್ನು ನಿರ್ಮಿಸಿದನು. ಅರ್ಥಾತ್ ಈ ದಿನ ಸತ್ಯಯುಗವು ಪ್ರಾರಂಭವಾಯಿತು. ಆದುದರಿಂದಲೇ ಈ ದಿನದಂದು ವರ್ಷಾರಂಭವನ್ನು ಮಾಡುತ್ತಾರೆ. ಯುಗಾದಿಯಂದು ತೇಜ ಮತ್ತು ಪ್ರಜಾಪತಿ ಲಹರಿಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ. ಸೂರ್ಯೋದಯದ ಸಮಯದಲ್ಲಿ ಈ ಲಹರಿಗಳಿಂದ ಪ್ರಕ್ಷೇಪಿತವಾಗುವ ಚೈತನ್ಯವು ಹೆಚ್ಚಿನ ಸಮಯದವರೆಗೆ ಉಳಿಯುತ್ತದೆ. ಅದು ಜೀವದ ಜೀವಕೋಶಗಳಲ್ಲಿ ಸಂಗ್ರಹವಾಗುತ್ತದೆ ಹಾಗೂ ಅವಶ್ಯಕತೆಗನುಸಾರ ಆ ಜೀವದಿಂದ ಉಪಯೋಗಿಸಲ್ಪಡುತ್ತದೆ.
ಯಾವುದೇ ಹಬ್ಬ ಬಂದರೆ ಆ ಹಬ್ಬದ ವೈಶಿಷ್ಟ್ಯದಂತೆ ಮತ್ತು ನಮ್ಮ ಪದ್ಧತಿಯಂತೆ ನಾವು ಏನಾದರೂ ಮಾಡುತ್ತಿರುತ್ತೇವೆ, ಆದರೆ ಧರ್ಮದಲ್ಲಿ ಹೇಳಿದಂತಹ ಇಂತಹ ಪಾರಂಪರಿಕ ಕೃತಿಯ ಹಿಂದಿನ ಅಧ್ಯಾತ್ಮಶಾಸ್ತ್ರವನ್ನು ಗಮನದಲ್ಲಿಟ್ಟುಕೊಂಡರೆ ಅದರ ಮಹತ್ವವು ನಮಗೆ ಹಿಡಿಸುತ್ತದೆ. ಇಲ್ಲಿ ನಾವು ಯುಗಾದಿಯಂದು ಮಾಡಬೇಕಾದ ಧಾರ್ಮಿಕ ಕೃತಿಗಳ ಮಾಹಿತಿಯನ್ನು ಪಡೆಯೋಣ.
ಅಭ್ಯಂಗಸ್ನಾನ
ಯುಗಾದಿ ಪಾಡ್ಯದ ದಿನ ಬೆಳಗ್ಗೆ ಬೇಗನೆ ಎದ್ದು ಮೊದಲು ಅಭ್ಯಂಗಸ್ನಾನ ಮಾಡಬೇಕು. ಅಭ್ಯಂಗಸ್ನಾನವನ್ನು ಮಾಡುವಾಗ ‘ದೇಶಕಾಲಕಥನ’ ಮಾಡಬೇಕು.‘ ದೇಶಕಾಲಕಥನ’ ದಿಂದ ಅಹಂ ಕಡಿಮೆಯಾಗಲು ಸಹಾಯವಾಗುತ್ತದೆ.
ತೋರಣವನ್ನು ಕಟ್ಟುವುದು
ಸ್ನಾನದ ಬಳಿಕ ಮಾವಿನ ಎಲೆಯ ತೋರಣವನ್ನು ತಯಾರಿಸಿ ಕೆಂಪು ಹೂವುಗಳೊಂದಿಗೆ ಎಲ್ಲ ಬಾಗಿಲುಗಳಿಗೆ ಕಟ್ಟಬೇಕು. ಏಕೆಂದರೆ ಕೆಂಪು ಬಣ್ಣ ಶುಭಸೂಚಕವಾಗಿದೆ. ಸಾತ್ತ್ವಿಕ ತೋರಣದಿಂದ ಚೈತನ್ಯ ಪ್ರಕ್ಷೇಪಿತವಾಗಿ ಸಂರಕ್ಷಣಾಕವಚ ನಿರ್ಮಾಣವಾಗುತ್ತದೆ.
ಪೂಜೆ
ಮೊದಲು ನಿತ್ಯಕರ್ಮ ದೇವರ ಪೂಜೆಯನ್ನು ಮಾಡಬೇಕು. ‘ವರ್ಷದ ಪಾಡ್ಯದಂದು ಮಹಾಶಾಂತಿ ಮಾಡಬೇಕು. ಶಾಂತಿಯ ಪ್ರಾರಂಭದಲ್ಲಿ ಬ್ರಹ್ಮದೇವನ ಪೂಜೆಯನ್ನು ಮಾಡಬೇಕು, ಏಕೆಂದರೆ ಬ್ರಹ್ಮದೇವನು ವಿಶ್ವವನ್ನು ಈ ದಿನವೇ ನಿರ್ಮಿಸಿದನು. ಪೂಜೆಯಲ್ಲಿ ಅವನಿಗೆ ದವನವನ್ನು (ಸುವಾಸನೆಯ ಎಲೆಗಳನ್ನು) ಅರ್ಪಿಸಬೇಕು. ಅನಂತರ ಹೋಮಹವನ ಮತ್ತು ಬ್ರಾಹ್ಮಣಸಂತರ್ಪಣೆ ಮಾಡಬೇಕು. ತರುವಾಯ ಅನಂತ ರೂಪಗಳಲ್ಲಿ ಅವತರಿಸುವ ಶ್ರೀವಿಷ್ಣುವಿನ ಪೂಜೆಯನ್ನು ಮಾಡಬೇಕು. ‘ನಮಸ್ತೆ ಬಹುರೂಪಾಯ ವಿಷ್ಣವೇ ನಮಃ|’ ಎನ್ನುವ ಮಂತ್ರವನ್ನು ಹೇಳಿ ಅವನಿಗೆ ನಮಸ್ಕರಿಸಬೇಕು. ಅನಂತರ ಬ್ರಾಹ್ಮಣರಿಗೆ ದಕ್ಷಿಣೆಯನ್ನು ನೀಡಬೇಕು, ಸಾಧ್ಯವಾದರೆ ಇತಿಹಾಸ, ಪುರಾಣ ಮುಂತಾದ ಗ್ರಂಥಗಳನ್ನು ಬ್ರಾಹ್ಮಣರಿಗೆ ದಾನವೆಂದು ನೀಡಬೇಕು. ಈ ಶಾಂತಿಯನ್ನು ಮಾಡುವುದರಿಂದ ಎಲ್ಲ ಪಾಪಗಳು ನಾಶವಾಗುತ್ತವೆ, ಸಂಕಟಗಳು ಬರುವುದಿಲ್ಲ,ಆಯುಷ್ಯವೃದ್ಧಿಯಾಗುತ್ತದೆ ಮತ್ತು ಧನಧಾನ್ಯಗಳ ಸಮೃದ್ಧಿಯಾಗುತ್ತದೆ.’ ಈ ದಿನ ಯಾವ ವಾರವಿರುತ್ತದೆಯೋ, ಆ ವಾರದೇವತೆಯ ಪೂಜೆಯನ್ನೂ ಮಾಡಬೇಕು.
ಬ್ರಹ್ಮಧ್ವಜವನ್ನು ಏರಿಸುವುದು
ಬಿದಿರಿನ ದೊಡ್ಡ ಕೋಲಿನ ತುದಿಗೆ ಹಸಿರು ಅಥವಾ ಹಳದಿ ಬಣ್ಣದ ಜರಿಯ ಖಣವನ್ನು ಕಟ್ಟುತ್ತಾರೆ. ಅದರ ಮೇಲೆ ಸಕ್ಕರೆಯ ಗಂಟು, ಬೇವಿನ ಚಿಗುರೆಲೆ, ಮಾವಿನ ಎಲೆ ಮತ್ತು ಕೆಂಪು ಹೂವುಗಳ ಹಾರವನ್ನು ಕಟ್ಟಿ ಮೇಲೆ ಬೆಳ್ಳಿಯ ಅಥವಾ ತಾಮ್ರದ ಕಲಶದಿಂದ ಶೃಂಗರಿಸಿ ಧ್ವಜವನ್ನು ನಿಲ್ಲಿಸುತ್ತಾರೆ. ಅದರ ಮುಂದೆ ಸುಂದರವಾದ ರಂಗೋಲಿ ಹಾಕುತ್ತಾರೆ. ಇದಕ್ಕೆ ‘ಬ್ರಹ್ಮಧ್ವಜಾಯ ನಮಃ|’ ಎಂದು ಹೇಳಿ ಸಂಕಲ್ಪಪೂರ್ವಕವಾಗಿ ಪೂಜೆ ಮಾಡಬೇಕು. ಎರಡನೆಯ ದಿನದಿಂದ ಈ ಕಲಶವನ್ನು ನೀರು ಕುಡಿಯಲು ಉಪಯೋಗಿಸಬೇಕು, ಸೂರ್ಯಾಸ್ತದ ಸಮಯದಲ್ಲಿ ಬೆಲ್ಲದ ನೈವೇದ್ಯವನ್ನು ತೋರಿಸಿ ಧ್ವಜವನ್ನು ಕೆಳಗಿಳಿಸುತ್ತಾರೆ.
ಧರ್ಮಧ್ವಜವನ್ನು ನಿಲ್ಲಿಸುವ ಪದ್ಧತಿ
೧. ಧರ್ಮಧ್ವಜದ ಸ್ಥಾನ : ಧರ್ಮಧ್ವಜವನ್ನು ಬಾಗಿಲ ಹೊರಗೆ; ಅದರೆ ಹೊಸ್ತಿಲಿನ ಹತ್ತಿರ (ಮನೆಯೊಳಗಿಂದ ನೋಡಿದರೆ) ಬಲಗಡೆಯಲ್ಲಿ ನಿಲ್ಲಿಸಬೇಕು.
೨. ಪದ್ಧತಿ :
ಅ. ಧರ್ಮಧ್ವಜವನ್ನು ನಿಲ್ಲಿಸುವಾಗ ಎಲ್ಲಕ್ಕಿಂತ ಮೊದಲು ಸೆಗಣಿಯಿಂದ ನೆಲಸಾರಿಸಿ ಅಂಗಳವನ್ನು ರಂಗೋಲಿಯಿಂದ ಸುಶೋಭಿತಗೊಳಿಸಬೇಕು. ಧರ್ಮಧ್ವಜವನ್ನು ನಿಲ್ಲಿಸುವ ಜಾಗದಲ್ಲಿ ರಂಗೋಲಿಯಿಂದ ಸ್ವಸ್ತಿಕವನ್ನು ಬಿಡಿಸಿ ಅದರ ಮಧ್ಯಬಿಂದುವಿನಲ್ಲಿ ಅರಿಷಿಣ ಕುಂಕುಮವನ್ನು ಹಾಕಬೇಕು.
ಆ. ಧರ್ಮಧ್ವಜವನ್ನು ನಿಲ್ಲಿಸುವಾಗ ಬ್ರಹ್ಮಾಂಡದಲ್ಲಿನ ಶಿವ ಶಕ್ತಿಯ ಲಹರಿಗಳ ಆವಾಹನ ಮಾಡಿ ಅವುಗಳನ್ನು ಸ್ವಸ್ತಿಕದ ಮೇಲೆ ಸ್ಥಾಪಿಸಬೇಕು. ಇದರಿಂದ ಧರ್ಮಧ್ವಜದ ತುದಿಯಲ್ಲಿ ಇರುವ ಎಲ್ಲ ಘಟಕಗಳಿಗೆ ದೇವತ್ವವು ಪ್ರಾಪ್ತವಾಗುತ್ತದೆ.
ಇ. ಧರ್ಮಧ್ವಜವನ್ನು ನೆಲದ ಮೇಲೆ ಹೊಸ್ತಿಲಿನ ಹತ್ತಿರ; ಆದರೆ ಸ್ವಲ್ಪ ಬಾಗಿದ ಸ್ಥಿತಿಯಲ್ಲಿ ನಿಲ್ಲಿಸಬೇಕು.
ಪಂಚಾಂಗ ಶ್ರವಣ ಎಂದರೇನು ಮತ್ತು ಅದರ ಮಹತ್ವ ಏನು?
ಜ್ಯೋತಿಷಿಯ ಪೂಜೆಯನ್ನು ಮಾಡಿ ಅವರಿಂದ ಅಥವಾ ಉಪಾಧ್ಯಾಯರಿಂದ ಹೊಸ ವರ್ಷದ ಪಂಚಾಂಗವನ್ನು ಅರ್ಥಾತ್ ವರ್ಷಫಲದ ಶ್ರವಣವನ್ನು ಮಾಡಬೇಕು. ಈ ವರ್ಷಫಲದ ಶ್ರವಣದ ಫಲ ಹೇಳಲಾಗಿದೆ, ಅದು ಮುಂದಿನಂತಿದೆ. ತಿಥಿಯ ಶ್ರವಣದಿಂದ ಲಕ್ಷ್ಮೀಯು ಲಭಿಸುತ್ತಾಳೆ, ವಾರದ ಶ್ರವಣದಿಂದ ಆಯುಷ್ಯವು ವೃದ್ಧಿಯಾಗುತ್ತದೆ, ನಕ್ಷತ್ರಶ್ರವಣದಿಂದ ಪಾಪನಾಶ ವಾಗುತ್ತದೆ, ಯೋಗಶ್ರವಣದಿಂದ ರೋಗಗಳ ನಿವಾರಣೆಯಾಗುತ್ತದೆ, ಕರಣ ಶ್ರವಣದಿಂದ ಇಚ್ಛಿತ ಕಾರ್ಯವು ಸಾಧ್ಯವಾಗುತ್ತದೆ. ಇವು ಪಂಚಾಂಗ ಶ್ರವಣದ ಉತ್ತಮ ಫಲಗಳಾಗಿವೆ. ಇದರ ನಿತ್ಯಶ್ರವಣದಿಂದ ಗಂಗಾಸ್ನಾನದ ಫಲವು ಲಭಿಸುತ್ತದೆ.’
ಬೇವಿನ ಮಿಶ್ರಣ
ಪಂಚಾಂಗಶ್ರವಣದ ನಂತರ ಕಹಿ ಬೇವಿನ ಮಿಶ್ರಣ ಹಂಚಬೇಕು. ಈ ಮಿಶ್ರಣವನ್ನು ಬೇವಿನ ಹೂವು, ಚಿಗುರೆಲೆಗಳು, ಜೇನು, ಜೀರಿಗೆ ಮತ್ತು ಸ್ವಲ್ಪ ಇಂಗು ಇವೆಲ್ಲವನ್ನು ಬೆರೆಸಿ ತಯಾರಿಸುತ್ತಾರೆ.
ಭೂಮಿಯನ್ನು ಉಳುವುದು
ಯುಗಾದಿಯಂದು ಭೂಮಿಯನ್ನು ಊಳಬೇಕು. ಭೂಮಿಯನ್ನು ಉಳುವಾಗ ಕೆಳಗಿನ ಮಣ್ಣು ಮೇಲೆ ಬರುತ್ತದೆ. ಮಣ್ಣಿನ ಸೂಕ್ಷ್ಮ-ಕಣಗಳ ಮೇಲೆ ಪ್ರಜಾಪತಿ ಲಹರಿಗಳ ಸಂಸ್ಕಾರವಾಗಿ ಬೀಜ ಮೊಳಕೆಯೊಡೆಯುವ ಭೂಮಿಯ ಸಾಮರ್ಥ್ಯವು ಅನೇಕ ಪಟ್ಟು ಹೆಚ್ಚಾಗುತ್ತದೆ. ಭೂಮಿಗೆ ಉಪಯೋಗಿಸಲ್ಪಡುವ ಸಲಕರಣೆ ಮತ್ತು ಎತ್ತುಗಳ ಮೇಲೆ ಪ್ರಜಾಪತಿ ಲಹರಿಗಳನ್ನು ಉತ್ಪನ್ನ ಮಾಡುವ ಮಂತ್ರಸಹಿತ ಅಕ್ಷತೆಗಳನ್ನು ಹಾಕಬೇಕು. ಹೊಲದಲ್ಲಿ (ಗದ್ದೆಯಲ್ಲಿ) ಕೆಲಸ ಮಾಡುವವರಿಗೆ ಹೊಸ ಬಟ್ಟೆಗಳನ್ನು ಕೊಡಬೇಕು. ಈ ದಿನ ಹೊಲದಲ್ಲಿ ಕೆಲಸ ಮಾಡುವ ಜನರ ಮತ್ತು ಎತ್ತುಗಳ ಭೋಜನದಲ್ಲಿ ಕುಂಬಳಕಾಯಿ, ಹೆಸರುಬೇಳೆ, ಅಕ್ಕಿ, ಹೂರಣ ಮುಂತಾದ ಪದಾರ್ಥಗಳಿರಬೇಕು.
ದಾನ
ಯಾಚಕರಿಗೆ ಅನೇಕ ವಿಧದ ದಾನವನ್ನು ಕೊಡಬೇಕು, ಉದಾ. ಅರವಟ್ಟಿಗೆಯನ್ನು (ಜಲ ಮಂದಿರ) ನಿರ್ಮಿಸಿ ನೀರಿನ ದಾನವನ್ನು ಮಾಡಬೇಕು. ಇದರಿಂದ ಪಿತೃಗಳು ಸಂತುಷ್ಟರಾಗುತ್ತಾರೆ.
ಈ ದಿನ ಅನೇಕ ವಿಧದ ಮಂಗಲ ಹಾಡುಗಳನ್ನು ಮತ್ತು ಪುಣ್ಯಪುರುಷರ ಕಥೆಗಳನ್ನು ಕೇಳುತ್ತಾ ಈ ದಿನವನ್ನು ಆನಂದದಿಂದ ಕಳೆಯಬೇಕು. ಈಗಿನ ಕಾಲದ ಹಬ್ಬವೆಂದರೆ ಮೋಜು ಮಜಾ ಮಾಡುವ ದಿನವೆಂಬ ಸಂಕಲ್ಪನೆ ಬರುವಂತಾಗಿದೆ, ಆದರೆ ಹಿಂದೂ ಧರ್ಮದ ಶಾಸ್ತ್ರೀಯ ಪದ್ಧತಿಯ ಹಬ್ಬವೆಂದರೆ ‘ಹೆಚ್ಚೆಚ್ಚು ಚೈತನ್ಯ ಪಡೆಯುವ ದಿನ’ವಾಗಿರುತ್ತದೆ. ಆದ್ದರಿಂದ ಹಬ್ಬದಂದು ಸಾತ್ತ್ವಿಕ ಆಹಾರ, ಸಾತ್ತ್ವಿಕ ಬಟ್ಟೆ ಹಾಗೂ ಇತರ ಧಾರ್ಮಿಕ ಕೃತಿ ಇತ್ಯಾದಿಗಳನ್ನು ಮಾಡುವುದರೊಂದಿಗೆ ಸಾತ್ತ್ವಿಕವಾದ ಸುಖದಾಯಕ ಕೃತಿಗಳನ್ನು ಮಾಡಲು ಶಾಸ್ತ್ರವು ಹೇಳಿದೆ. ಈ ರೀತಿ ಯುಗಾದಿಯನ್ನು ಆಚರಿಸುವುದರಿಂದ ಆರೋಗ್ಯ, ಕೃಷಿ ಮುಂತಾದವು ಹೆಚ್ಚಾಗುತ್ತದೆ.